ನಾಗೇಶ ಹೆಗಡೆ
ಸಂಪಾದಕ ಮಂಡಲಿಯ ಪರವಾಗಿ
ನಾವೊಂದು ವಿಲಕ್ಷಣ ಮಾಹಿತಿ ಪ್ರವಾಹದಲ್ಲಿದ್ದೇವೆ. ಎಸ್ಸೆಸ್ಸೆಲ್ಸಿ ಪಾಸು ಮಾಡಿದ ಅನೇಕರಿಗೆ ಎಸ್ಸೆಸ್ಸೆಲ್ಸಿ ಪದದ ಪೂರ್ಣರೂಪ ಗೊತ್ತಿರುವುದಿಲ್ಲ. ಅದನ್ನು ತಿಳಿದುಕೊಳ್ಳಬೇಕೆಂಬ ಹಂಬಲ ಯಾರಿಗಾದರೂ ಬಂತೆಂದರೆ ಕನ್ನಡದಲ್ಲಿ ಯಾವ ನಿಘಂಟಿನಲ್ಲೂ ಅದು ಸಿಗುವುದಿಲ್ಲ; ಯಾವ ವಿಶ್ವಕೋಶದಲ್ಲೂ ಅದನ್ನು ಹುಡುಕಲು ಸಾಧ್ಯವಿಲ್ಲ. ಹಾಗೆಂದು ಅದು ಇಂಗ್ಲಿಷ್ ಪದಗಳ ಹ್ರಸ್ವರೂಪ ಆಗಿದ್ದರಿಂದಲೇ ಈ ಸ್ಥಿತಿಯೆಂದು ಹೇಳುವ ಹಾಗೂ ಇಲ್ಲ. ಕನ್ನಡದ ಸಂಕ್ಷಿಪ್ತಾಕ್ಷರಗಳದೂ ಅದೇ ಸ್ಥಿತಿ ಇದೆ. ಸರಕಾರಿ ಕಾಗದಪತ್ರಗಳಲ್ಲಿ 'ಈಎಹೆಗು' ಎಂಬ ಅಚ್ಚಕನ್ನಡದ್ದೇ ಅಕ್ಷರಪುಂಜ ಇರುತ್ತಿತ್ತು (ಈಗಲೂ ಇದ್ದೀತು; 'ಈತನ ಎಡಗೈ ಹೆಬ್ಬೆಟ್ಟಿನ ಗುರುತು' ಈಗಲೂ ಸರಕಾರಕ್ಕೆ ಮತ್ತೆ ಮತ್ತೆ ಬೇಕಾಗುತ್ತದೆ). ಅದರ ಪೂರ್ಣರೂಪವನ್ನು ಅವರಿವರನ್ನು ಕೇಳಿ ಮೌಖಿಕವಾಗಿಯೇ ಪಡೆಯಬೇಕೆ ವಿನಾ ಲಿಖಿತ ರೂಪದಲ್ಲಿ ಕಿಟ್ಟೆಲ್ ನಿಘಂಟಿನಲ್ಲೂ ಇರಲಿಕ್ಕಿಲ್ಲ; 'ಕನ್ನಡ ರತ್ನಕೋಶ'ದಲ್ಲಂತೂ ಇಲ್ಲ.
ಈಗಂತೂ ಸಂಕ್ಷಿಪ್ತಾಕ್ಷರಗಳ ಮಹಾಪೂರವೇ ಬರುತ್ತಿದೆ. ದಿನಕ್ಕೊಂದರಂತೆ, ಎರಡರಂತೆ, ನಾಲ್ಕರಂತೆ ಹೊಸ ಹೊಸ ಅಬ್ರಿವೇಶನ್‌ಗಳು ಇಂಗ್ಲಿಷ್‌ನಲ್ಲಿ ಬರುತ್ತಿದ್ದದ್ದು, ಅದೂ ಭಾಷೆಗಳ ಗಡಿಯನ್ನು ಕ್ಯಾರೇ ಮಾಡದೇ ಎಲ್ಲರ ನಾಲಗೆಯಲ್ಲಿ ನುಗ್ಗುತ್ತಿದೆ. ಸಿಮ್ಮು, ಡಿಟಿಪಿ, ಬ್ಲಾಗು, ವೈಫೈ ಇತ್ಯಾದಿ ಪದಸಾಗರದಲ್ಲಿ ಕನ್ನಡದ ನಾವೆ ಮೆಲ್ಲಗೆ ಚಲಿಸುತ್ತಿದೆ. ಸಂಕ್ಷಿಪ್ತ ಅಕ್ಷರಗಳ ಮೂಲ ರೂಪ ಕನ್ನಡಿಗರಿಗೆ ಅಷ್ಟೇ ಅಲ್ಲ, ಇಂಗ್ಲಿಷನ್ನೇ ಮಾತಾಡುತ್ತ ಕಂಪ್ಯೂಟರ್ ಜಗತ್ತಿನಲ್ಲಿ ಅಹೋರಾತ್ರಿ ವಿಹರಿಸುವವರಿಗೂ ಅದೆಷ್ಟೊ ಪದಗಳ ಪೂರ್ಣ ರೂಪವೂ ಗೊತ್ತಿರುವುದಿಲ್ಲ; ನಿಖರ ಅರ್ಥವೂ ಗೊತ್ತಿರುವುದಿಲ್ಲ. ಇನ್ನು ಕನ್ನಡದೊಳಗೇ ನುಗ್ಗಿ ಕನ್ನಡದ್ದೇ ಪದಗಳೆಂಬಂತೆ ಬಳಕೆಯಾಗುತ್ತಿರುವ ಹಾರ್ಡ್ ಡಿಸ್ಕು, ಬ್ಲೂಟೂತು, ಹ್ಯಾಶ್‌ಟ್ಯಾಗು, ಬಾರ್‌ಕೋಡುಗಳಿಗೂ ವಿವರಣೆ ಬೇಕೆಂದರೆ ಸುಲಭಕ್ಕೆ ಸಿಗುವಂತಿಲ್ಲ.
ಈ ಸಂದರ್ಭಕ್ಕೆ ಸರಿಯಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇಂಥದ್ದೊಂದು ಕೃತಿಯನ್ನು ಹೊರತರುತ್ತಿರುವುದು ಶ್ಲಾಘನೀಯ ಕೆಲಸವೇ ಹೌದು. ಹಾಗೆಂದು ಇದೇ ಮೊದಲ ಬಾರಿ ಅಂತೇನಲ್ಲ, ೧೫ ವರ್ಷಗಳ ಹಿಂದೆ 'ಕಂಪ್ಯೂಟರ್ ಪದವಿವರಣ ಕೋಶ'ವನ್ನು ಪ್ರಾಧಿಕಾರ ಪ್ರಕಟಿಸಿತ್ತು. ಅದು ಈಗ 'ಡಾಸ್' ('ದಾಸ' ಸಾಹಿತ್ಯದಷ್ಟು ಹಿಂದಿನ) ಕಾಲದ್ದೇನೊ ಎಂದೆನಿಸುವಷ್ಟು ವೇಗದಲ್ಲಿ ಕಂಪ್ಯೂಟರ್ ಲೋಕ ವಿಸ್ತರಿಸುತ್ತಿದೆ, ನವೀಕೃತಗೊಳ್ಳುತ್ತಿದೆ. ನಿಘಂಟುಗಳೂ ಅದೇ ವೇಗದಲ್ಲಿ ನವೀಕರಣಗೊಳ್ಳಬೇಕಿದೆ. ಈ ಕೆಲಸದಲ್ಲಿ ಪ್ರಾಧಿಕಾರದೊಂದಿಗೆ ಕೈಜೋಡಿಸಿದ ಇಜ್ಞಾನ ಟ್ರಸ್ಟ್, ವಿಶೇಷವಾಗಿ ಟಿ. ಜಿ. ಶ್ರೀನಿಧಿಯ ಚುರುಕಿನ ಕೆಲಸವನ್ನು ನಾವು ಮೆಚ್ಚಿಕೊಳ್ಳಲೇಬೇಕು.
ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಹೊಸ ಕನ್ನಡ ಪದಗಳನ್ನು ಸೃಷ್ಟಿಸುವ ಕೆಲಸ ಇದರಲ್ಲಿ ನಡೆದಿಲ್ಲ. ಕೇವಲ ಇಂಗ್ಲಿಷ್ ಪದಗಳಿಗೆ ವಿವರಣೆಗಳನ್ನಷ್ಟೇ ನೀಡಲಾಗಿದೆ. 'ವಿಡಿಯೊ'ಕ್ಕೆ 'ನೋಡಿಯೊ' ಅಂತಲೋ 'ಸೆಲ್ಫಿ'ಗೆ 'ಸ್ವಂತಿ' ಎಂತಲೋ ಅಲ್ಲಲ್ಲಿ ಹೊಸ ಪದಗಳು ತಾವಾಗಿ ಸೃಷ್ಟಿಯಾಗುತ್ತಿವೆ. ಇಲ್ಲಿ ಹಾಗೆ ಹೊಸ ಪದಗಳನ್ನೇನೂ ಸೃಷ್ಟಿಸಿಲ್ಲ. 'ಬ್ರೌಸರ್' ಎಂಬ ಪದವನ್ನು ಹಾಗೆಯೇ ಇಟ್ಟು, ಅದಕ್ಕೆ ಕನ್ನಡದಲ್ಲಿ ವಿವರಣೆಯನ್ನು ನೀಡಲಾಗಿದೆ ಅಷ್ಟೆ. ಸುಲಭವಾಗಿ ಕನ್ನಡದಲ್ಲಿ ಅರ್ಥಗಳನ್ನು ನೀಡಬಹುದಾದ ಪದಗಳಿಗೆ (ಉದಾ: 'ಮಾಲ್‌ವೇರ್' ಎಂಬ ಪದಕ್ಕೆ 'ಕುತಂತ್ರಾಂಶ') ಸಮಾನಾರ್ಥ ಪದಗಳನ್ನು ಕೊಡಲಾಗಿದೆ, ಜೊತೆಗೆ ಇನ್ನಷ್ಟು ವಿವರಣೆಯನ್ನೂ ಕೊಡಲಾಗಿದೆ. ಸಂದರ್ಭ ಬಂದಾಗಲೆಲ್ಲ ಕೆಲವು ಪದಗಳ ವ್ಯುತ್ಪತ್ತಿಯನ್ನೂ ಕೊಡಲಾಗಿದೆ. ಉದಾಹರಣೆಗೆ 'ಬ್ಲೂಟೂಥ್'ಗೂ ಯುರೋಪಿನ ಹಳೇಕಾಲದ ರಾಜನೊಬ್ಬನಿಗೂ ಏನು ಸಂಬಂಧ; 'ಬ್ರೆಡ್‌ಕ್ರಂಬ್ಸ್' ಎಂಬುದನ್ನು ಯಾವ ಮಕ್ಕಳ ಕತೆಯಿಂದ ಎತ್ತಿಕೊಂಡಿದ್ದು ಇತ್ಯಾದಿ ಸ್ವಾರಸ್ಯಕರ ಸಂಗತಿಗಳು ಇದರಲ್ಲಿವೆ.
ಈ ಪದವಿವರಣ ಕೋಶದಲ್ಲಿ ಮುನ್ನೂರಕ್ಕೂ ಹೆಚ್ಚು ಪದಗಳಿಗೆ ಮತ್ತು ಸಂಕ್ಷೇಪಾಕ್ಷರಗಳಿಗೆ ವಿವರಣೆಗಳು ಸಿಗುತ್ತವೆ. ಈ ಪದಗಳನ್ನು ಕನ್ನಡ ಉಚ್ಚಾರಣೆಯ ಅಕಾರಾದಿ ಕ್ರಮದಲ್ಲೇ ಜೋಡಿಸಲಾಗಿದೆ. ನಾಲ್ಕಾರು ಪುಟ ತಿರುಗಿಸುತ್ತಲೇ ಅದು ಎಲ್ಲರ ಗಮನಕ್ಕೂ ತಂತಾನೆ ಬರುತ್ತದೆ. ಬೇಕಿದ್ದರೆ ಕೊನೆಯಲ್ಲಿ ಕೊಡಲಾದ ಸೂಚಿಪಟ್ಟಿಯಲ್ಲೂ ಆಯಾ ಪದದ ಪುಟಸಂಖ್ಯೆಯನ್ನು ನೋಡಬಹುದು.
ದಿನದಿನವೂ ಬೆಳೆಯುತ್ತಿರುವ ಮಹಾವೃಕ್ಷದಂತೆ ಮಾಹಿತಿ ಮತ್ತು ಸಂಪರ್ಕರಂಗ ವಿಸ್ತರಿಸುತ್ತಿದೆ. ಈಗಿರುವ ಪದಗಳಿಗೆ ಹೊಸ ಹೊಸ ಅರ್ಥಗಳು ಅನ್ವಯವಾಗುತ್ತಿವೆ. 'ಫೋಟೊಶಾಪ್' ಅಂದರೆ ಫೋಟೊ ತೆಗೆಸುವ ಅಂಗಡಿ ಎಂದಾಗಲೀ 'ಪವರ್ ಪಾಯಿಂಟ್' ಎಂದರೆ ಶಕ್ತಿಬಿಂದುವೆಂದಾಗಲೀ ಯಾರೂ ಈಗ ಅಂದುಕೊಳ್ಳುವುದಿಲ್ಲ. ಪದ ಮತ್ತು ಅರ್ಥಗಳು ಬದಲೀರೂಪ ಪಡೆಯುತ್ತಲೇ ಇರುತ್ತವೆ. ಹಾಗೆಯೇ ಹೊಸ ಹೊಸ ಪದಗಳು ನಿರಂತರ ಸೃಷ್ಟಿಯಾಗುತ್ತಲೇ ಇರುತ್ತವೆ. ಆದ್ದರಿಂದ ಈ ಕೋಶ ಪರಿಪೂರ್ಣವಾಗಲು ಸಾಧ್ಯವೇ ಇಲ್ಲ. ಆದರೆ ಹೊಸ ಪದಗಳು ಚಾಲ್ತಿಗೆ ಬಂದಾಗಲೆಲ್ಲ ಅದನ್ನು ಸೇರಿಸಲೆಂದು ಇದರದ್ದೇ ಆನ್‌ಲೈನ್ ಆವೃತ್ತಿಯೂ ಜೊತೆಜೊತೆಗೇ ಸಿದ್ಧವಾಗುತ್ತಿದೆ. ಈ ಮುದ್ರಿತ ಪುಸ್ತಕದ್ದೂ ಪರಿಷ್ಕೃತ ಆವೃತ್ತಿ ಕಾಲಕಾಲಕ್ಕೆ ಪ್ರಕಟವಾಗುವ ಸಾಧ್ಯತೆಯಿದೆ. ಇದರಲ್ಲಿ ಹೊಸ ಪದಗಳನ್ನು ಸೇರಿಸುವ ಬಗ್ಗೆ, ಈಗಿರುವ ಪದಕ್ಕೆ ಹೊಸ ವಿವರಣೆ ಬೇಕಾಗಿದ್ದರೆ ಅಥವಾ ತಾಜಾ ಕನ್ನಡ ಪದವೊಂದು ಸೃಷ್ಟಿಯಾದರೆ ಅದನ್ನು ಸಂಪಾದಕರ ಗಮನಕ್ಕೆ ತರಲಡ್ಡಿಯಿಲ್ಲ. ಅದಕ್ಕೆ ಸ್ವಾಗತವಿದೆ.
ಕಂಪ್ಯೂಟರ್ ಮತ್ತು ಮಾಹಿತಿಕ್ಷೇತ್ರ ಇಂದು ಜ್ಞಾನದ ಎಲ್ಲ ಶಾಖೆಗಳಿಗೂ ವಿಸ್ತರಿಸುತ್ತಿದೆ. ಬದುಕಿನ ಎಲ್ಲ ರಂಗಗಳಿಗೂ ಅದು ಅತ್ಯಗತ್ಯವೆನಿಸುತ್ತಿದೆ. ಅಕ್ಷರ ಕಲಿಯುವ ಮೊದಲೇ ಕಂಪ್ಯೂಟರ್ ಕ್ಷೇತ್ರಕ್ಕೆ ಅಂಬೆಗಾಲಿನವರೂ ಎಂಟ್ರಿ ಕೊಡುತ್ತಿದ್ದಾರೆ. ಎಂಭತ್ತರ ಆಚಿನವರೂ ಅಂಬೆಗಾಲಿಡುತ್ತಲೇ ಪ್ರವೇಶ ಮಾಡುವಂತಾಗಿದೆ. ಅವರೆಲ್ಲರ ಅಗತ್ಯಕ್ಕೆ ತಕ್ಕಂತೆ ಈ ಆಕರಪುಸ್ತಕವನ್ನು ರೂಪಿಸಿದ ಟಿ. ಜಿ. ಶ್ರೀನಿಧಿಗೆ ನಾವೆಲ್ಲ ಮತ್ತೊಮ್ಮೆ ಕೃತಜ್ಞತೆ ಹೇಳಬೇಕು. ಬಹುಪಾಲು ಒಬ್ಬಂಟಿಯಾಗಿ ಈ ವಿವರಣ ಕೋಶವನ್ನು ಅವರು ಸೃಷ್ಟಿಸಿದ್ದಾರೆ. ನಾವು ಸೂಚಿಸಿದ ಚಿಕ್ಕಪುಟ್ಟ ಬದಲಾವಣೆಯನ್ನು ಅಗತ್ಯವಿದ್ದಲ್ಲಿ ಕಾರ್‍ಯಗತ ಮಾಡಿದ್ದಾರೆ. ಅವರ ಬೆನ್ನು ತಟ್ಟಿದ್ದೊಂದೇ ನಾವು ಮಾಡಿದ ಕಾಯಾ-ವಾಚಾ-ಮನಸಾ ಕೆಲಸ. ಇಂಥದ್ದೊಂದು ಬಹುಮೂಲ್ಯ ಕೃತಿಯನ್ನು ಪ್ರಕಟಿಸುವಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ಧರಾಮಯ್ಯ, ಅಧ್ಯಕ್ಷರ ಆಪ್ತಕಾರ್ಯದರ್ಶಿಗಳಾಗಿದ್ದ ಡಾ. ಕೆ. ಪುಟ್ಟಸ್ವಾಮಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳಿಧರ ಅವರು ಉತ್ಸಾಹದಿಂದ ಮುಂದೆ ಬಂದು ಅನುದಾನದ ವ್ಯವಸ್ಥೆ ಮಾಡಿದ್ದಾರೆ. ಅವರಿಗೂ ಕೃತಜ್ಞತೆಗಳು.
['ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ'ದ ಮುದ್ರಿತ ಆವೃತ್ತಿಗಾಗಿ ಬರೆದ ಪ್ರಸ್ತಾವನೆ]